ಬೆಂಬೊ, ಪ್ಯೇತ್ರೊ
1470-1547 ಇಟಲಿಯ ಬರಹಗಾರ ಮತ್ತು ಧರ್ಮೋಪದೇಶಕ. ಹುಟ್ಟಿದ್ದು ವೆನ್ನಿಸ್‍ನಲ್ಲಿ. ಇಟಲಿ ಭಾಷೆಯನ್ನು ಕುರಿತ ಚರ್ಚೆ ಎಂಬ ಈತನ ಪ್ರಬಂಧ ಸಾಹಿತ್ಯರಚನೆಗೆ ಉಚಿತವಾದ ಶೈಲಿ ಯಾವುದೆಂಬ ಜಿಜ್ಞಾಸೆಗೆ ನಾಂದಿಯಾಯಿತು. ಹೊಸ ಸಾಹಿತ್ಯ ರಚನೆಗೆ ಲ್ಯಾಟಿನ್ ಭಾಷೆಗಿಂತಲೂ ಇಟಾಲಿಯನ್ ಭಾಷೆಯೇ ಅತ್ಯಂತ ಪರಿಣಾಮಕಾರಿಯಾದುದು. ಡಾಂಟೆ, ಪೆಟ್ರಾರ್ಕ್, ಬೊಕ್ಯಾಚಿಯೊ ಮುಂತಾದ ಹದಿನಾಲ್ಕನೆಯ ಶತಮಾನದ ಸಾಹಿತಿಗಳೆಲ್ಲರೂ ಉಪಯೋಗಿಸಿದ ಫ್ಲಾರೆನ್ಸ್ ನುಡಿಯನ್ನು ತನ್ನ ಕಾಲದ ಸಾಹಿತಿಗಳೂ ಅನುಸರಿಸಬೇಕು-ಇವು ಈತ ಒತ್ತಿ ಹೇಳಿದ ಮುಖ್ಯ ತತ್ತ್ವಗಳು. ಈ ಮೊದಲು, ಕ್ಯಾಸ್ಟೀಲಿಯೋನಿ ಎಂಬ ಇಟಲಿಯ ಸಾಹಿತಿ ಹೊಸ ಇಟಾಲಿಯನ್ ಭಾಷೆ ಟಸ್ಕನಿ ಪ್ರಾಂತದಾಚೆಯ ಪ್ರಾದೇಶಿಕ ನುಡಿಗಳಿಂದಲೂ ಬೇರೆ ದೇಶಗಳ ಭಾಷೆ ಗಳಿಂದಲೂ ಮುಖ್ಯ ಅಂಶಗಳನ್ನು ತೆಗೆದುಕೊಂಡು ಬೆಳೆಯಬೇಕೆಂದು ವಾದಿಸಿದ್ದ. ಇದನ್ನು ಖಂಡಿಸಿ ಬೆಂಬೊ ಇಟಾಲಿಯನ್ ಭಾಷೆ ತನ್ನತನವನ್ನುಳಿಸಿಕೊಳ್ಳಬೇಕೆಂದು ಅವನ ವಿರುದ್ಧ ವಾದಿಸಿದ. 

	ಪ್ರೇಮದ ವಿವಿಧ ಸ್ವರೂಪಗಳನ್ನು ಚರ್ಚಿಸುವ (ಪ್ಲೇಟೋವಿನ ಸಂವಾದಗಳ ಮಾದರಿಯ) ಈತನ ಆಸೋಲಾನಿ ಎಂಬ ಗ್ರಂಥ ನವೀನ ರೀತಿಯದು. ಪೆಟ್ರಾರ್ಕ್‍ನ್ನು ಅನುಕರಿಸಿ ಬರೆದ ರೈಮ್ (1530) ಎಂಬ ಕವನ ಸಂಗ್ರಹ ಈತನ ಪಾಂಡಿತ್ಯವನ್ನು ತೆರೆದು ತೋರಿಸುತ್ತದೆ.									 
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ